ರಾಜ್ಯಮಟ್ಟದ ‘ವಕೀಲರ ಮೇಳ’ಕ್ಕೆ ಅದ್ದೂರಿ ತೆರೆ; ಸೃಷ್ಟಿಯಾಯಿತು ಹೊಸ ಅಲೆ

ಶಿರಸಿ: ಕಳೆದೆರಡು ದಿನದಿಂದ ನಡೆಯುತ್ತಿದ್ದ ರಾಜ್ಯ ಮಟ್ಟದ ವಕೀಲರ ಮೇಳ ಮಂಗಳವಾರ ರಾತ್ರಿ ನಗರದ ಅಪೊಲೋ ಇಂಟರ್ ನ್ಯಾಷನಲ್ ಹೊಟೆಲ್ ಆವರಣದಲ್ಲಿ ಅದ್ದೂರಿ ತೆರೆ ಕಂಡಿತು.

ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ವಕೀಲ ಪರಿಷತ್ತಿನ ಭೋಜೆಗೌಡ ಮಾತನಾಡಿ, ಇಲ್ಲಿ ನಡೆದ ರಾಜ್ಯಮಟ್ಟದ ವಕೀಲರ ಮೇಳ ಪರಿಷತ್ತಿನಲ್ಲಿ ಇತಿಹಾಸ ಮೂಡಿಸಿದೆ. ಇಂತಹ ವಕೀಲರ ಮೇಳಗಳು ಮುಂದಿನ ದಿನದಲ್ಲಿ ಮತ್ತೆ ನಡೆಯುವಂತೆ ಎಲ್ಲರೂ ಒಟ್ಟಾಗಿ ಸ್ಪಂದಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಪರಿಷತ್ತಿನ ಸದಸ್ಯ ಶ್ರೀನಿವಾಸ ಬಾಬು ಮಾತನಾಡಿ, ಇಂತಹ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿ, ರವೀಂದ್ರ ನಾಯ್ಕ ಒಬ್ಬ ಸಂಘಟನಾ ಚತುರರು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಇಂತಹ ಕ್ರಿಯಾಶೀಲ ವ್ಯಕ್ತಿಗಳು ಮುಂದಿನ ದಿನದಲ್ಲಿ ಬಾರ್ ಕೌನ್ಸಿಲ್ ಸದಸ್ಯರಾಗಬೇಕು ಎಂದರು.

ಪ್ರಶಸ್ತಿ ವಿತರಣೆ: 
ರಾಜ್ಯ ಮಟ್ಟದ ವಕೀಲರ ಮೇಳ-2016 ರ ಕ್ರೀಡಾ ಸ್ಪರ್ಧೆಯ ಕ್ರಿಕೆಟ ವಿಭಾಗದಲ್ಲಿ ಹೊಸಕೋಟೆ ವಕೀಲರ ತಂಡ ಚಾಂಪಿಯನ್ ಹಾಗೂ ಬೆಂಗಳೂರು ಎ.ಎ.ಬಿ. ವಕೀಲರ ತಂಡ ರನ್ನರ್ ಅಫ್ ಹಾಗೂ ಮಹಿಳಾ ಥ್ರೋಬಾಲ್ ಹಾಸನ ತಂಡ ಚಾಂಪಿಯನ್ ಹಾಗೂ ಮಂಡ್ಯ ವಕೀಲರ ತಂಡ ರನ್ನರ್ಸ ಅಫ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪಂದ್ಯ ಪುರುಷೋತ್ತಮ ಮಂಜುನಾಥ ಬೆಂಗಳೂರು, ಉತ್ತಮ ಎಸೆತಗಾರ ಅರವಿಂದ ನಾವಡಾ, ಹೊಸಕೋಟೆ, ಉತ್ತಮ ದಾಂಡಿಗ ಜಗದೀಶ ಬಿ. ಹೊಸಕೋಟೆ ಪ್ರಶಸ್ತಿಯನ್ನು ಪಡೆದರು. 

ಮಹಿಳಾ ಥ್ರೋಬಾಲ್ ನಲ್ಲಿ ಹಾಸನ ವಕೀಲ ಸಂಘವು ಮಂಡ್ಯ ವಕೀಲರ ತಂಡವನ್ನು 2-0 ಅಂತರದಲ್ಲಿ ಮಣಿಸಿ ವಿಜಯಶಾಲಿಯಾಯಿತು. (25-9, 25-14). ಸರ್ವೋತ್ತಮ ಆಟಗಾರ್ತಿ ಸುಜಾತಾ ಹಾಸನ, ಉತ್ತಮ ಸರ್ವರ್ ಸಚಿತಾ ಡಿ ಹಾಸನ, ಉತ್ತಮ ಹಿಡಿತಗಾರ್ತಿ ಜಯಲಕ್ಷ್ಮೀ ಮಂಡ್ಯ ಆಗಿದ್ದಾರೆ. ಕ್ರಿಕೇಟ ವಿಭಾಗದಲ್ಲಿ ರಾಜ್ಯಾದ್ಯಂತ 28 ಜಿಲ್ಲೆಗಳಿಂದ 30 ಕ್ರಿಕೇಟ್ ತಂಡಗಳು ಆಗಮಿಸಿದ್ದು ಅದರಂತೆ ಮಹಿಳಾ ಥ್ರೋಬಾಲ್ ನಲ್ಲಿ ರಾಜ್ಯಾದ್ಯಂತ 14 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ಶಿರಸಿ ವಕೀಲರ ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ, ನಿಕಟಪೂರ್ವ ಅಧ್ಯಕ್ಷ ಸದಾನಂದ ಭಟ್ಟ ನಿಡಗೋಡ, ನಗರಸಭಾ ಅಧ್ಯಕ್ಷ ಪ್ರದೀಪ ಶೆಟ್ಟಿ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

Leave a comment